ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬಹುನಿರೀಕ್ಷೆಯ ನಟ ಸಾರ್ವಭೌಮ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ನಿನ್ನೆ ಅದ್ದೂರಿಯಾಗಿ ನಡೆಯಿತು.
ಈ ಮೊದಲು ಐಟಿ ಶಾಕ್ ಹಿನ್ನೆಲೆಯಲ್ಲಿ ಆಡಿಯೋ ಬಿಡುಗಡೆ ಬಗ್ಗೆ ಅನುಮಾನವಿತ್ತು. ಆದರೆ, ನಿನ್ನೆ ಮಧ್ಯಾಹ್ಯದ ವೇಳೆ ಎಲ್ಲಾ ಗೊಂದಲಗಳಿಗೆ ತೆರೆ ಎಳೆದ ಪುನೀತ್ ರಾಜ್ ಕುಮಾರ್, ಫೇಸ್ ಬುಕ್ ಲೈವ್ ನಲ್ಲಿ ಹುಬ್ಬಳ್ಳಿಗೆ ಬರುತ್ತಿರುವುದಾಗಿ ಅಭಿಮಾನಿಗಳಿಗೆ ಖುಷಿ ನೀಡಿದ್ದರು.
ನೆಹರೂ ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿದ ಅಭಿಮಾನಿಗಳ ಹರ್ಷೋದ್ಘಾರದ ಮಧ್ಯೆ ನಟಸಾರ್ವಭೌಮ ಚಿತ್ರದ ಹಾಡುಗಳ ಬಿಡುಗಡೆಯಾಯಿತು.
ಈ ಚಿತ್ರದ ನಾಯಕಿ ರಚಿತಾರಾಮ್, ಪುನೀತ್ ರಾಜ್ ಕುಮಾರ್ ಸಹೋದರ ರಾಘವೇಂದ್ರ ರಾಜ್ ಕುಮಾರ್, ಗುರು ವಿನಯ್ ಕುಮಾರ್ ಸೇರಿದಂತೆ ಡಾ. ರಾಜ್ ಕುಮಾರ್ ಕುಟುಂಬದ ಸದಸ್ಯರು ನಟಸಾರ್ವಭೌಮನ ಆಡಿಯೋ ಬಿಡುಗಡೆಗೆ ರಂಗು ತುಂಬಿದರು.
ಪುನೀತ್ ರಾಜ್ ಕುಮಾರ್ ಕ್ರೇನ್ ಮೂಲಕ ವೇದಿಕೆಗೆ ಎಂಟ್ರಿ ನೀಡುತ್ತಿದ್ದಂತೆ ಅಭಿಮಾನಿಗಳ ಜಯಘೋಷ ಮುಗಿಲುಮುಟ್ಟಿತು. ರಾಘವೇಂದ್ರ ರಾಜ್ ಕುಮಾರ್ , ಅವರ ಕಿರಿಯ ಪುತ್ರ ಯುವರಾಜ್ ಹಾಗೂ ರಚಿತಾ ರಾಮ್ ನೃತ್ಯ ಅಭಿಮಾನಿಗಳ ಮನ ರಂಜಿಸಿತು.
ನಟ ಸಾರ್ವಭೌಮ ಚಿತ್ರದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಫೆಬ್ರವರಿ ಮೊದಲ ವಾರದಲ್ಲಿ ನಟ ಸಾರ್ವಭೌಮ ಚಿತ್ರ ತೆರೆಗೆ ಅಪ್ಪಳಿಸಲಿದೆ.
No comments:
Post a Comment